Archive for May 21, 2009
ಹೆಸರಿಡದ ಹನಿಗಳು….!!
ಹಾಗೇ ಹೊಳೆದ ಕೆಲವು ಸಾಲುಗಳು… ಇವುಗಳಿಗೆ ಹೆಸರಿಡುವ ಸಾಹಸ ಮಾಡದೇ ಹಾಗೇ ಪೋಸ್ಟ್ ಮಾಡಿದ್ದೇನೆ… ಓದಿ ಏನನ್ನಿಸಿತು…?? ದಯವಿಟ್ಟು ಹೇಳಿ…
1.
ಅದೇನು ಆತುರ ನಿನಗೆ..??
ನಾನು ಕಣ್ಣು ಮಿಟುಕಿಸುವ ಮೊದಲೇ…
ನನ್ನ ಗಲ್ಲವ ಕಚ್ಛಾಯ್ತು…!!
ಅದೆಷ್ಟು ಗಾಢ ವರ್ಣ
ನಿನ್ನ ಲಿಪ್ ಸ್ಟಿಕ್ನದು..??
ನನಗರಿವಿಲ್ಲದೆಯೇ
ನಾಳಿನ ನ್ಯೂಸ್ ಪೇಪರ್
ಅಚ್ಛಾಯ್ತು…..!!
****************************
2.
ಮಂದಿರದ ಕೇಸರಿ ಪತಾಕೆ….
ಮಸೀದಿಯ ಹಸಿರು ಗೋಡೆ….
ಚರ್ಚಿನ ಬಿಳಿಯ ಬಾಗಿಲು….
ಸೂರ್ಯನುದಯಕ್ಕೆ ಕಾತರಿಸಿವೆ…
ಸೂರ್ಯನ ಬೆಳಕಲ್ಲಿ ಅವುಗಳ
ನೆರಳಿಗೆ ಒಂದೇ ಬಣ್ಣ…..!!
****************************
3.
ನವ ವಧುವಂತೆ
ಸಿಂಗರಿಸಿಕೊಂಡು
ಭೂ ತಾಯಿ
ಮೆರವಣಿಗೆ ಹೊರಟಿದ್ದಾಳೆ…
ಚೆಲುವಿಗೆ
ಮನಸೋತ ತಾರೆಗಳು
ಮೋಡದ ಮರೆಯಲ್ಲಿ ನಿಂತು
ಫೋಟೋ ಕ್ಲಿಕ್ಕಿಸುತ್ತಿವೆ…!!
ತಪ್ಪಿರುವ ಕಾಗುಣಿತ….!!!
ನಾನೆಂಬ ಭಾವನೆಯ ಮೇಲೆ
ಅಲ್ಪಪ್ರಾಣ…
ನೀನೆಂಬ ಮಾಯೆಯ ಮೇಲೆ
ಮಹಾಪ್ರಾಣ….
ಎಲ್ಲೋ ಉದ್ಘಾರ ವಾಚಕ,
ಇನ್ನೆಲ್ಲೋ ಪ್ರಶ್ನಾರ್ತಕ….
ಅಲ್ಲೆಲ್ಲೋ ಅಲ್ಪವಿರಾಮ,
ಮತ್ತೆಲ್ಲೋ ಪೂರ್ಣವಿರಾಮ…
ಹೃಸ್ವ, ಧೀರ್ಘ….,
ಕೊಂಬು, ತಲೆಗಟ್ಟು ಯಾವುದೂ
ಇರಬೇಕಾದಲ್ಲಿ ಇಲ್ಲ….
ಪ್ರತಿ ಸಾಲಿನಲ್ಲೂ ತಪ್ಪು ಹೆಜ್ಜೆಯಿಟ್ಟು
ತಡವರಿಸುತ್ತಿರುವ ಕಾಗುಣಿತ…
ಆದರೂ ನಿಶ್ಚಿಂತೆ….
ಏನೂ ಇಲ್ಲದಿದ್ದರೂ
ನೀನಿರುವೆಯೆಂಬ ಕಲ್ಪನೆಯೊಂದಿದೆ..
ಆ ಕಲ್ಪನೆಯಿಂದಲೇ
ನನ್ನ ಕವಿತೆಗಳಿಗೆ ಹೊಸ ಅರ್ಥ ಬಂದಿದೆ…
ಬೆಂಕಿ ಮತ್ತು ಹೊಗೆ
ಬೆಂಕಿಯಿಲ್ಲದೇ ಹೊಗೆಯಾಡುವದಿಲ್ಲ
ನೀನು ಹೃದಯಕ್ಕೆ ಬೆಂಕಿಯಿಟ್ಟೆ….
ಗಡoಗಿನ ಗೋಡೆಗೊರಗಿ,
ಕೊರಗಿ, ಸೊರಗಿ…
ನಾನು ಹೊಗೆಯ
ಸುರುಳಿಗಳಲ್ಲಿ ಲೀನವಾದೆ…!!
ಪ್ರೀತಿಯ ಲೆಕ್ಕಾಚಾರ
ಅಧರ ಅಧರಗಳ
ಮಧುರ ಸಂಕಲನ….
ಸಮಕ್ಷಮ ಸಮಾಗಮ
ವ್ಯಥೆಯ ವ್ಯವಕಲನ…
ಮುತ್ತು ಗುಣಿಲೆ ಹತ್ತು
ನಿಲ್ಲದ ಗುಣಾಕಾರ…
ಮತ್ತು ಬಾಗಿಲೆ ಹೊತ್ತು
ಗೆಲ್ಲದ ಭಾಗಾಕಾರ…
ನಿನ್ನಲ್ಲಿ ನನ್ನ
ಕೂಡಿ-ಕಳೆದು
ಗುಣಿಸಿ-ಭಾಗಿಸಿದರೂ
ಉಳಿದದ್ದು
ಒಂದೇ ಉಸಿರು…
ಒಂದೇ ಕನಸು…
ಒಂದೇ ಪ್ರಾಣ…
ಪ್ರೀತಿಯ ಲೆಕ್ಕಾಚಾರ
ಬಲು ವಿಚಿತ್ರ….!!
ಪ್ರತಿಕ್ರಿಯೆ